ವಿನಯಾದಿತ್ಯ 2

	ಹೊಯ್ಸಳ ದೊರೆ (ಸು. 1047-98). ಕೆಲವು ಶಾಸನಗಳ ಪ್ರಕಾರ ಇವನು ನೃಪಕಾಮನ ಮಗ (ಆದರೆ ಈ ಸಂಬಂಧದ ಬಗ್ಗೆ ವಿದ್ವಾಂಸರಲ್ಲಿ ಒಮ್ಮತವಿಲ್ಲ). ಈತ ಗಂಗರ ವೈಶಿಷ್ಟ್ಯವಾದ ರಾಚಮಲ್ಲ ರಕ್ಕಸಗಂಗ ಎಂಬ ಬಿರುದನ್ನು ತಳೆದಿದ್ದ. ಒಂದೆಡೆ ಈತ ಗಂಗವಾಡಿಯನ್ನು ಆಳುತ್ತಿದ್ದನೆಂಬ ಉಲ್ಲೇಖವೂ ದೊರಕುತ್ತದೆಯಾಗಿ ವಿನಯಾದಿತ್ಯ ಗಂಗವಂಶಕ್ಕೆ ಯಾವುದೋ ರೀತಿಯಲ್ಲಿ ಸಂಬಂಧಿಸಿದ್ದನೆಂಬ ಊಹೆ ಇದೆ. ಅಥವಾ ಹೊಯ್ಸಳರಲ್ಲಿ ತಾವು ಗಂಗರ ರಾಜಕೀಯ ಉತ್ತರಾಧಿಕಾರಿಗಳು ಎಂಬ ಭಾವನೆಯೂ ಇದ್ದಿರಬಹುದು. ಪ್ರಾಯಶಃ ಈ ಕಾರಣದಿಂದಾಗಿ ಪಕ್ಕದಲ್ಲಿ ಆಳುತ್ತಿದ್ದ ಚೋಳರೊಡನೆ ಯಾವ ಸಂಬಂಧವನ್ನೂ ಇಟ್ಟುಕೊಳ್ಳದೆ, ಉತ್ತರದ ಕಲ್ಯಾಣದ ಚಾಳುಕ್ಯರೊಡನೆ ರಾಜಕೀಯ ಮತ್ತು ರಕ್ತಸಂಬಂಧ ಬೆಳೆಸಿದ. ವಿನಯಾದಿತ್ಯನ ಸೋದರಿ ಹೊಯ್ಸಳದೇವಿ 1ನೆಯ ಸೋಮೇಶ್ವರನನ್ನು ಮದುವೆಯಾಗಿದ್ದಳು. 2ನೆಯ ಸೋಮೇಶ್ವರ ಮತ್ತು 6ನೆಯ ವಿಕ್ರಮಾದಿತ್ಯರೊಡನೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡು ಅವರ ಛಾತ್ರ ಸಾಧನೆಯಲ್ಲಿ ತನ್ನ ಮಕ್ಕಳು ಮತ್ತು ಮೊಮ್ಮಕ್ಕಳು ಪಾಲ್ಗೊಳ್ಳುವಂತೆ ವ್ಯವಸ್ಥೆಮಾಡಿದನಲ್ಲದೆ, ತನ್ನ ಸ್ಥಾನವನ್ನೂ ಭದ್ರಪಡಿಸಿಕೊಂಡು ಚಂಗಾಳ್ವರ ಮತ್ತು ಕೊಂಗಾಳ್ವರ  ಮೇಲೆ ವಿಜಯವನ್ನು ಸಾಧಿಸಿದ. ಮೊದಲು 1 ಮತ್ತು 2ನೆಯ ಸೋಮೇಶ್ವರರ ಕಾಲದಲ್ಲಿ ಚಳುಕ್ಯರ ಸ್ನೇಹಿತನಾಗಿದ್ದ ಈ 2ನೆಯ ಸೋಮೇಶ್ವರನ ವಿರುದ್ಧ ವಿಕ್ರಮಾದಿತ್ಯ ಬಂಡೆದ್ದು ರಾಜ್ಯಸಾಧಿಸಿಕೊಂಡ ವಿಷಮಕಾಲದಲ್ಲಿ ಗತ್ಯಂತರವಿಲ್ಲದೆ ಅವನ ಸಾಮಂತತ್ವವನ್ನು ಒಪ್ಪಿಕೊಂಡಿರಬಹುದೆನಿಸುತ್ತದೆ. ಚಾಳುಕ್ಯ ಸಾಮಂತತ್ವದ ಕುರುಹಾಗಿ ಇವನು ತ್ರಿಭುವನಮಲ್ಲ ಎಂಬ ಬಿರುದನ್ನು ಧರಿಸಿದ್ದ.
	
ಬೇಲೂರು ಮತ್ತು ದ್ವಾರಸಮುದ್ರ ಇವನ ರಾಜಧಾನಿಗಳು. ಒಂದು ಶಾಸನದಲ್ಲಿ ಕೊಂಕಣ, ಆಳ್ವಖೇಡ, ವೈನಾಡು ಮತ್ತು ತಲಕಾಡು ಇವನ ರಾಜ್ಯದ ಮೇರೆಗಳು ಎಂದು ಹೇಳಿದೆ. ಇದು ಮತ್ತು ಇತರ ಆಧಾರಗಳಿಂದ ವಿನಯಾದಿತ್ಯನ ಆಳಿಕೆ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲದೆ, ಮೈಸೂರು, ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಯ ಹಲವು ಭಾಗಗಳಿಗೂ ವಿಸ್ತರಿಸಿದ್ದಿತೆಂದೂ ತಿಳಿಯಬಹುದು.

	ವಿನಯಾದಿತ್ಯ ಜೈನಮತಾವಲಂಬಿ, ಶಾಂತಿದೇವನ ಶಿಷ್ಯ. ಇವನಿಗೆ ಕಳೆಯಬ್ಬರಸಿ ಎಂಬ ರಾಣಿಯೂ ಎರೆಯಂಗನೆಂಬ ಮಗನೂ ಇದ್ದರು. ಮಹಾಸಂಧಿವಿಗ್ರಹಿ ಪೋಚಿಮಯ್ಯ, ದಂಡನಾಯಕರಾದ ಮರಿಯಾನೆ ಮತ್ತು ಬಾಹುಬಲಿ ಇವನ ಆಸ್ಥಾನದಲ್ಲಿದ್ದ ಮುಖ್ಯ ಅಧಿಕಾರಿಗಳು.

	ಈತನು ಮತ್ತಾವರದ ಬಳಿಯಲ್ಲಿ ಅನೇಕ ಜೈನಬಸದಿಗಳನ್ನು ಕಟ್ಟಿಸಿ ವ್ಯವಸಾಯಕ್ಕಾಗಿ ಕಾಲುವೆಯೊಂದನ್ನು ತೋಡಿಸಿದ. ಇವನ ಕಾಲದಲ್ಲಿ ಸೊಸೆವೂರು ಅಥವಾ ಶಶಕಪುರ, ಶ್ರವಣಬೆಳಗೊಳ, ಚಿಕ್ಕಹನಸೋಗೆ ಮತ್ತು ಇತರ ಸ್ಥಳಗಳಲ್ಲಿ ಜೈನಬಸದಿಗಳು ನಿರ್ಮಾಣ ವಾದವು. ತೊಣಚಿಯ ಬಸವೇಶ್ವರ, ಕುಬಟೂರಿನ ಕೈಟಭೇಶ್ವರ, ಬಳ್ಳಿಗಾ ಮೆಯ ಕೇದಾರೇಶ್ವರ ದೇವಾಲಯಗಳು ವಿನಯಾದಿತ್ಯನ ಆಳಿಕೆಯಲ್ಲಿ ಕಟ್ಟಲ್ಪಟ್ಟವೆಂದು ತಿಳಿದುಬರುತ್ತದೆ. ವಿನಯಾದಿತ್ಯನ ಮರಣಾನಂತರ ಇವನ ಮಗ ಎರೆಯಂಗ ಪಟ್ಟಕ್ಕೆ ಬಂದ.											
(ಬಿ.ಎಸ್.ಎನ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ